7 Jul 2015

07-07-2015
ಕಾವೇರಿಕಾನ ತೋಟದಲ್ಲಿ ಸೂರಂಬೈಲು ಶಾಲೆಯ ಮಕ್ಕಳು.
 
ನಮ್ಮ ದೇಶವು ಕೃಷಿ ಪ್ರಧಾನವಾದ ದೇಶವಾಗಿದೆ. ಕೃಷಿ ಮಾಡುವುದರಿಂದ ಕೈಗಾರಿಕೆಗಳಿಗೆ ಬೇಕಾದ ಕಚ್ಛಾವಸ್ತುಗಳು ಸಿಗುತ್ತವೆ. ಕೃಷಿ ಸಮೃದ್ಧವಾಗಬೇಕಾದರೆ ಆಸಕ್ತಿ ಮುಖ್ಯವಾಗಿದೆ. ಹೊಸ ಹೊಸ ಕೃಷಿತಂತ್ರಜ್ಞಾನಗಳನ್ನು ಕರಗತಮಾಡುವ ಗುಣವಿರುವ ಕೃಷಿಕರಿಗೆ ಕೃಷಿ ಯಾವತ್ತೂ ಹೊರೆಯಾಗದು. ಉತ್ತಮ ಬೀಜಗಳ ಆಯ್ಕೆ, ಸಸ್ಯಗಳ ಪೋಷಣೆ ಮತ್ತು ನಿರ್ವಹಣೆ ಕೃಷಿಯ ಪ್ರಮುಖವಾದ ವಿಚಾರಗಳಾಗಿವೆ. ಇವು ಮೂರು ಒಂದಕ್ಕೊಂದು ಪೂರಕವೆನಿಸಿದಾಗ ಕೃಷಿ ಕೆಲಸ ಹಗುರವೆನಿಸುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಕಸಿಕಟ್ಟುವಿಕೆ ಆಗಿದೆ. ಕಸಿಕಟ್ಟಿ ಹೊಸ ಸಸ್ಯ ಮಾಡುವುದರಿಂದ ಬೇಗನೆ ಬೆಳವಣಿಗೆ ಉಂಟಾಗುತ್ತದೆ, ಉತ್ತಮ ತಳಿಯ ಗಿಡಗಳನ್ನು ತಯಾರಿಸಬಹುದಾಗಿದೆ.ಬೇಗನೆ ಫಸಲು ಕೈಸೇರುವುದು. ಕಸಿಕಟ್ಟುವ ವಿಜ್ಞಾನ ಕೃಷಿಲೋಕದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಎ೦ದು ಕಾವೇರಿಕಾನ ಶಂಕರ ಭಟ್ ನುಡಿದರು. ಅವರು ಸೂರಂಬೈಲು ಶಾಲೆಯ ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ತಿಳುವಳಿಕಾ ತರಗತಿ ನಡೆಸಿ ಕಸಿಕಟ್ಟುವ ಪ್ರಾತ್ಯಕ್ಷಿಕೆಯನ್ನು ಮಾಡಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳ ಅನೇಕ ಸಂಶಯಗಳನ್ನು ನಿವಾರಿಸಿದ್ದಲ್ಲದೆ ಕೃಷಿಯ ಕುರಿತಾದ ಅನೇಕ ಮಾಹಿತಿಗಳನ್ನು ನೀಡಿದರು. ಕೆಲವು ಸಸ್ಯಗಳನ್ನು ಮಕ್ಕಳಿಗೆ ನೀಡಿ ಅವುಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು. ಉಪಾಹಾರ ವಿತರಣೆಯ ಬಳಿಕ ಮಕ್ಕಳ ಪ್ರತಿನಿಧಿಯಾಗಿ ಯಕ್ಷಿತಾ ಧನ್ಯವಾದ ನೀಡಿದಳು. ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಮತ್ತು ಶಶಿಕಲಾ ಸಿ.ಎಚ್ ನೇತೃತ್ವ ನೀಡಿದರು.






1 comment: